Atal Pension : ಸಾಮಾಜಿಕ ಭದ್ರತೆ ಒದಗಿಸುವ ಅಟಲ್ ಪೆನ್ಶನ್ ಯೋಜನೆ

Finance Minister
0

Author: Arun Killuru 

Atal Pension: ಅಸಂಘಟಿತ ವರ್ಗದ ಜನರಿಗೆ ಸಾಮಾಜಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ 2015ರಲ್ಲಿ ಜಾರಿಗೆ ತಂದ ಯೋಜನೆಯ ಅಟಲ್ ಪೆನ್ಷನ್ ಯೋಜನ ಅಥವಾ apy. ಈ ಯೋಜನೆಯಡಿ ಚಂದಾದಾರರು ತಮಗೆ 60 ವರ್ಷ ಆದಾಗ ತಮ್ಮ ಕೊಡುಗೆ ಅಥವಾ ಕಾಂಟ್ರಿಬ್ಯುಶನ್ ಗೆ ಅನುಗುಣವಾಗಿ ರೂ.1 ಸಾವಿರ, 2 ಸಾವಿರ, 3 ಸಾವಿರ, 4 ಸಾವಿರ, 5 ಸಾವಿರ ರೂಪಾಯಿಗಳನ್ನು ಪ್ರತಿ ತಿಂಗಳು ಪಿಂಚಣಿ ಆಗಿ ಪಡೆಯಲು ಅವಕಾಶ ಇರುತ್ತದೆ. 18ನೇ ವಯಸ್ಸಿನಿಂದ 40 ವರ್ಷ ಒಳಗಿನವರಿಗೆ ಮಾತ್ರ ಯೋಜನೆಗೆ ಸೇರಲು ಅವಕಾಶ ಇರುತ್ತದೆ. 



ಖಾತೆ ತೆರೆಯುವುದು ಹೇಗೆ?

18 ರಿಂದ 40 ವರ್ಷ ಒಳಗಿನವರು ಬ್ಯಾಂಕ್ ಅಥವಾ ಅಂಚೆ ಕಚೇರಿಯ ಶಾಖೆಯ ಮೂಲಕ ಯೋಜನೆಗೆ ಸೇರ್ಪಡೆ ಆಗಬಹುದು. ಈ ಸಂದರ್ಭದಲ್ಲಿ ಅರ್ಜಿದಾರರು ನಾಮಿನಿ ಮತ್ತು ತಮ್ಮ ಗಂಡ ಅಥವಾ ಹೆಂಡತಿಯ ವಿವರಗಳನ್ನು ನೀಡುವುದು ಕಡ್ಡಾಯವಾಗಿದೆ. ಉಳಿತಾಯ ಬ್ಯಾಂಕ್ ಖಾತೆಯಿಂದ ಆಟೋ ಡೆಬಿಟ್ ಸೌಲಭ್ಯದ ಮೂಲಕ ಮಾಸಿಕ, ತ್ರೈಮಾಸಿಕ ಅಥವಾ ಅರ್ಧವಾರ್ಷಿಕ ಆಧಾರದ ಮೇಲೆ ಯೋಜನೆಗೆ ಕೊಡುಗೆಯನ್ನು ನೀಡಬಹುದು.



ಪಿಂಚಣಿ Contribution ವಿವರ

5 ಸಾವಿರ ಮಾಸಿಕ ಪಿಂಚಣಿ ಪಡೆಯಲು 18 ವರ್ಷ ತುಂಬಿದವರು 42 ವರ್ಷಗಳ ಕಾಲ ಮಾಸಿಕ 210 ತುಂಬಿದರೆ ಸಾಕಾಗುತ್ತದೆ. 3 ತಿಂಗಳಿಗೊಮ್ಮೆ 626, ಅರ್ಧವಾರ್ಷಿಕವಾಗಿ 1239 ರೂಪಾಯಿ ಕೂಡ ಕೊಡುಗೆ ನೀಡಬಹುದು.

ಇದೇ ವೇಳೆ ಯೋಜನೆಯ ಕೊನೆಯ ಹಂತದಲ್ಲಿ ಅಂದರೆ 39ನೇ ವಯಸ್ಸಿನಲ್ಲಿ ಯೋಜನೆಗೆ ಸೇರಿದವರು 5000 ಪಿಂಚಣಿ ಪಡೆಯಲು 21 ವರ್ಷಗಳ ಕಾಲ ತಿಂಗಳಿಗೆ 1,318, ಮೂರು ತಿಂಗಳಿಗೆ 3928, ಅರ್ಧ ವಾರ್ಷಿಕವಾಗಿ 7,778 ರೂಪಾಯಿ ಕೊಡುಗೆ ನೀಡಬೇಕಾಗುತ್ತದೆ.

ನಿರ್ಗಮನಕ್ಕೆ ಅವಕಾಶ

ಚಂದಾದಾರರಿಗೆ ಸ್ವಯಂ ಪ್ರೇರಿತವಾಗಿ 60 ವರ್ಷಕ್ಕಿಂತ ಮೊದಲೇ ನಿರ್ಗಮನ ಮಾಡಲು ಅವಕಾಶ ಸಹ ಇರುತ್ತದೆ. ಖಾತೆ ಇರುವ ಬ್ಯಾಂಕ್ ಅಥವಾ ಅಂಚೆ ಕಚೇರಿಗೆ ಹೋಗಿ ಅಗತ್ಯ ನಮೂನೆಯನ್ನು ನೀಡಿ ಈ ಬಗ್ಗೆ ವಿನಂತಿ ಸಲ್ಲಿಸಬಹುದು. ಚಂದಾದಾರರ ಬ್ಯಾಂಕಿನ ಉಳಿತಾಯ ಖಾತೆಗೆ ಹಣವನ್ನು ಸಂದಾಯ ಮಾಡಲಾಗುವುದು.




60 ವರ್ಷ ಮುನ್ನ ಸತ್ತರೆ?

ಚಂದಾದಾರರು 60 ವರ್ಷ ಮುನ್ನವೇ ತೀರಿಕೊಂಡಲ್ಲಿ, 60 ವರ್ಷ ತಲುಪುವವರೆಗಿನ ಉಳಿದ ಹೂಡಿಕೆಯ ಹಣವನ್ನು ಗಂಡ ಅಥವಾ ಹೆಂಡತಿ ಮುಂದುವರಿಸಲು ಅವಕಾಶ ಇರುತ್ತದೆ. ಒಂದು ವೇಳೆ ಗಂಡ ಅಥವಾ ಹೆಂಡತಿ ಖಾತೆಯನ್ನು ಮುಂದುವರಿಸಲು ಇಚ್ಛಿಸದಿದ್ದಲ್ಲಿ ಚಂದಾದಾರರು ಅಲ್ಲಿಯವರೆಗೆ ನೀಡಿದ ಕೊಡುಗೆ ಹಾಗೂ ಕೊಡುಗೆಯ ಮೇಲೆ ಗಳಿಸಿದ ಬಡ್ಡಿಯೊಂದಿಗೆ ಹಣವನ್ನು ಪಾವತಿಸಲಾಗುತ್ತದೆ.



60 ವರ್ಷದ ನಂತರ ಯೋಜನೆಯ ಖಾತೆದಾರ ಮರಣ ಹೊಂದಿದಲ್ಲಿ, ಮಾಸಿಕ ಪಿಂಚಣಿಯನ್ನು ಚಂದಾದಾರರ ಗಂಡ ಅಥವಾ ಹೆಂಡತಿಗೆ ಪಾವತಿಸಲಾಗುವುದು. ಬಳಿಕ ಗಂಡ ಅಥವಾ ಹೆಂಡತಿ ತೀರಿಕೊಂಡಲ್ಲಿ ಪಿಂಚಣಿಯಲ್ಲಿ ಸಂಗ್ರಹವಾದ ಹಣವನ್ನು ನಾಮೀನಿಗೆ ಪಾವತಿ ಮಾಡಲಾಗುತ್ತದೆ. ನಾಮಿನಿಯು ಚಂದಾದಾರರ ಗಂಡ ಅಥವಾ ಹೆಂಡತಿ ಹೊರತುಪಡಿಸಿ ಇತರರು ಆಗಿರಬೇಕು.


ನಾಮಿನಿಗೆ ನೀಡುವ ಮೊತ್ತ

ಯೋಜನೆಯಲ್ಲಿ ನೋಂದಣಿ ಆಗಿದ್ದ ಚಂದದಾರ ಹಾಗೂ ಅವರ ಸಂಗಾತಿ ನಿಧನ ಆದ ಬಳಿಕ ನಾಮಿನಿಗೆ ಪಿಂಚಣಿಯ ಸಂಪತ್ತನ್ನು ನೀಡಲಾಗುವುದು. ಒಂದು ಸಾವಿರ ರೂಪಾಯಿ ಮಾಸಿಕ ಪಿಂಚಣಿ ಇದಲ್ಲಿ 1.7 ಲಕ್ಷ ರೂಪಾಯಿ, 2 ಸಾವಿರ ಮಾಸಿಕ ಪಿಂಚಣಿ ಇದ್ದಲ್ಲಿ 3.4 ಲಕ್ಷ ರೂಪಾಯಿ, 3 ಸಾವಿರ ಮಾಸಿಕ ಪಿಂಚಣಿ ಇದ್ದಲ್ಲಿ 5.1 ಲಕ್ಷ ರೂಪಾಯಿ, 4 ಸಾವಿರ ರೂ. ಮಾಸಿಕ ಪಿಂಚಣಿ ಇದ್ದಲ್ಲಿ 6.8 ಲಕ್ಷ ರೂಪಾಯಿ, ಐದು ಸಾವಿರ ರೂಪಾಯಿ ಮಾಸಿಕ ಪಿಂಚಣಿ ಇದ್ದಲ್ಲಿ 8.5 ಲಕ್ಷ ರೂಪಾಯಿ ಪಿಂಚಣಿಯನ್ನು ನಾಮಿನಿಗೆ ನೀಡಲಾಗುವುದು.


ವಹಿವಾಟು ವೀಕ್ಷಣೆಗೆ ಅವಕಾಶ

www.npscra.nsdl.co.in ಇಲ್ಲಿ ಅಟಲ್ ಪಿಂಚಣಿ ಯೋಜನೆ ಇಲ್ಲಿ ಭೇಟಿ ನೀಡಿ PRAN CARD ಪಡೆಯಬಹುದು. APY APP ಮೂಲಕ ವಹಿವಾಟು ವೀಕ್ಷಣೆ ಮಾಡಬಹುದಾಗಿದೆ.


ಆದಾಯ ತೆರಿಗೆ ಪಾವತಿದಾರರಿಗೆ ಇನ್ನಿಲ್ಲ ಅವಕಾಶ

ಹಣಕಾಸು ಸಚಿವಾಲಯ ಈ ಯೋಜನೆಯಲ್ಲಿ ಹೊಸ ಬದಲಾವಣೆಯನ್ನು ತರಲು ಮುಂದಾಗಿದೆ. ಇಲ್ಲಿಯವರೆಗೆ ಆದಾಯ ತೆರಿಗೆ ಪಾವತಿದಾರರಿಗೆ ಈ ಯೋಜನೆಯಲ್ಲಿ ಸೇರ್ಪಡೆಯಾಗಲು ಅವಕಾಶ ಇತ್ತು. ಇದರ ಜೊತೆಗೆ ತೆರಿಗೆ ವಿನಾಯಿತಿ ಪಡೆಯಲು ಸಹ ಅವಕಾಶ ನೀಡಿತ್ತು. ಆದರೆ ಅಕ್ಟೋಬರ್ 1, 2022ಕ್ಕೆ ಅನ್ವಯಿಸುವಂತೆ ಆದಾಯ ತೆರಿಗೆ ಪಾವತಿದಾರರು ಇನ್ನು ಮುಂದೆ ಹೊಸದಾಗಿ ಯೋಜನೆಗೆ ಸೇರ್ಪಡೆ ಆಗುವುದನ್ನು ನಿರ್ಬಂಧಿಸಲಾಗುತ್ತಿದೆ. ಒಂದು ವೇಳೆ ಅಕ್ಟೋಬರ್ 1, 2022ರ ಬಳಿಕ ಆದಾಯ ತೆರಿಗೆ ಪಾವತಿದಾರರು ಯೋಜನೆಗೆ ಸೇರ್ಪಡೆ ಆದಲ್ಲಿ, ಅವರ ಖಾತೆಯನ್ನು ಕ್ಲೋಸ್ ಮಾಡಿ ಅವರು ಪಾವತಿ ಮಾಡಿದ ಹಣವನ್ನು ಹಿಂದಿರುಗಿಸಲಾಗುವುದು. ವಾರ್ಷಿಕ ಆದಾಯ 2.5 ಲಕ್ಷ ರೂಪಾಯಿಗಿಂತ ಹೆಚ್ಚು ಇರುವವರು ಭಾರತದಲ್ಲಿ ಆದಾಯ ತೆರಿಗೆಯನ್ನು ಕಟ್ಟಬೇಕಿದೆ. 


ಅಕ್ಟೋಬರ್ 1, 2022ರ ಮುನ್ನ ಯೋಜನೆಗೆ ಸೇರ್ಪಡೆಯಾದವರಿಗೆ ಯಾವುದೇ ಸಮಸ್ಯೆ ಇರುವುದಿಲ್ಲ. ಅವರಿಗೆ ಯೋಜನೆಯಲ್ಲಿ ಸಿಗುವ ಎಲ್ಲಾ ಲಾಭಗಳು ಸಿಗಲಿವೆ. 


ಭಾರತದಲ್ಲಿ ಮಾರ್ಚ್ 2022ರ ವೇಳೆಗೆ ಒಟ್ಟು 4.01 ಕೋಟಿ ಚಂದಾದಾರರು ಇದ್ದಾರೆ. ವೃದ್ದಾಪ್ಯದಲ್ಲಿ ನೆರವಾಗುವ ದೃಷ್ಠಿಯಿಂದ ಅಸಂಘಟಿತ ವಲಯದ ಕಾರ್ಮಿಕರು ಈ ಯೋಜನೆಗೆ 40 ವರ್ಷದ ಒಳಗೆ ಸೇರ್ಪಡೆ ಆಗಬಹುದು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ (0)